ನಮೀಬಿಯಾಕ್ಕೆ ಜೈಶಂಕರ್ ಭೇಟಿ:
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ನಮೀಬಿಯಾಕ್ಕೆ ಭೇಟಿ ನೀಡಿದ್ದರು. ನಮೀಬಿಯಾ ವಿದೇಶಾಂಗ ವ್ಯವಹಾರಗಳ ಸಚಿವೆ ನೆಟುಂಬೊ ನ್ಯಾಂಡಿ ಎನ್‍ದೈತ್ವಾ ಅವರೊಂದಿಗೆ ಮಾತುಕತೆ ನಡೆಸಿದರು. ಈ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್. ಭಾರತ ಈಗ ಜಗತ್ತಿನ ಐದನೆಯ ದೊಡ್ಡ ಆರ್ಥಿಕತೆಯ ದೇಶ ಎಂಬ ಮಾಹಿತಿ ನೀಡಿದರು. ನಮೀಬಿಯಾ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ದೇಶ. ಜಾಂಬಿಯಾ, ಅಂಗೋಲಾ, ಬೋಟ್ಸ್‍ವಾನಾ ಮತ್ತು ದಕ್ಷಿಣ ಆಫ್ರಿಕಾಗಳೊಂದಿಗೆ ಗಡಿಗಳನ್ನು ಹೊಂದಿದೆ. 1990 ಮಾರ್ಚ್ 21ರಂದು ದಕ್ಷಿಣ ಆಫ್ರಿಕಾದಿಂದ ಸ್ವಾತಂತ್ರ್ಯ ಪಡೆಯಿತು. ಈ ದೇಶದ ರಾಜಧಾನಿ ವಿಂಡೊಯಿಕ್. 


ಜನರಲ್ ಮನೋಜ್ ಪಾಂಡೆ ಅವರಿಗೆ `ಗಾರ್ಡ್ ಆಫ್ ಆನರ್’:
ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದಾಗ ಅವರಿಗೆ `ಗಾರ್ಡ್ ಆಫ್ ಆನರ್’ ಗೌರವ ನೀಡಲಾಯಿತು. ಬಾಂಗ್ಲಾದ ಸೇನಾ ಮುಖ್ಯಸ್ಥ ಎಸ್.ಎಂ.ಶೈಫಿಯುದ್ದೀನ್ ಅಹಮದ್ ಮತ್ತು ಸಶಸ್ತ್ರ ಪಡೆಗಳ ಮುಖ್ಯ ಸೇನಾ ಅಧಿಕಾರಿ ವಾಕರ್ ಉಜ್ ಉಮನ್ ಅವರೊಂದಿಗೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಹಿತಾಸಕ್ತಿ, ರಕ್ಷಣೆ ಮತ್ತು ಭದ್ರತಾ ವಲಯದಲ್ಲಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವುದು ಮುಂತಾದ ವಿಷಯಗಳ ಕುರಿತು ಮಾತುಕತೆಗಳಾದವು.


ರಕ್ಷಣಾ ಕ್ಷೇತ್ರದಲ್ಲಿ ಭಾರತ-ಅಮೆರಿಕಗಳಿಂದ ಜಂಟಿ ಸಹಭಾಗಿತ್ವದ ನೀಲನಕ್ಷೆ:
ಅಮೆರಿಕದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತಕ್ಕೆ ಭೇಟಿ ನೀಡಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಬಾಲ್ ಅವರೊಂದಿಗೆ ಮಾತುಕತೆ ನಡೆಸಿದರು. ಸೇನಾ ಪರಿಕರಗಳು, ಹಾರ್ಡ್‍ವೇರ್‍ಗಳ ಅಭಿವೃದ್ಧಿ, ವಿವಿಧ ಯೋಜನೆಗಳಿಗೆ ಆದ್ಯತೆ ನೀಡುವಿಕೆ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಜಂಟಿ ಸಹಭಾಗಿತ್ವ ಕುರಿತು ಉಭಯ ದೇಶಗಳು ನೀಲನಕ್ಷೆ ರೂಪಿಸಿವೆ. ಜಂಟಿ ಸಹಭಾಗಿತ್ವದಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿ, ಉತ್ಪಾದನೆಗೆ ಅವಕಾಶಗಳನ್ನು ಗುರುತಿಸಲಾಗಿದೆ. ಅಮೆರಿಕದ ಜನರಲ್ ಅಟೊಮಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಸಂಸ್ಥೆಯಿಂದ ಒಕಿ-9ಃ ಹೆಸರಿನ ಶಸ್ತ್ರಸಜ್ಜಿತ ಡ್ರೋನ್ ಖರೀದಿಸಲು ಭಾರತ ಉದ್ದೇಶಿಸಿದೆ. 


ಗ್ಲೋಬಲ್ ಹೆಲ್ತ್ ಆ್ಯಂಡ್ ಸೋಷಿಯಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿ ವಿಕ್ರಮ್ ಪಟೇಲ್:
ಹಾರ್ವರ್ಡ್ ಮೆಡಿಕಲ್ ಸ್ಕೂಲ್‍ನ ಗ್ಲೋಬಲ್ ಹೆಲ್ತ್ ಆ್ಯಂಡ್ ಸೋಷಿಯಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಸಂಜಾತ ಖ್ಯಾತ ಸಂಶೋಧಕ ಹಾಗೂ ಮಾನಸಿಕ ಆರೋಗ್ಯ ತಜ್ಞ ವಿಕ್ರಮ್ ಪಟೇಲ್ ನೇಮಕಗೊಂಡಿದ್ದಾರೆ. ಸದ್ಯ ಇವರು ಹಾರ್ವರ್ಡ್ ಮೆಡಿಕಲ್ ಸ್ಕೂಲ್‍ನ ಬ್ಲಾವಾಟ್ನಿಕ್ ಇನ್ಸ್‍ಸ್ಟಿಟ್ಯೂಟ್‍ನ ಗ್ಲೋಬಲ್ ಹೆಲ್ತ್ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 


ವಿಖ್ಯಾತ ಓಟಗಾರ ಜಿಮ್ ಹೈನ್ಸ್ ನಿಧನ:
ಪುರುಷರ 100 ಮೀಟರ್ ಓಟವನ್ನು 10 ಸೆಕೆಂಡುಗಳ ಒಳಗೆ ಕ್ರಮಿಸಿದ್ದ ವಿಶ್ವದ ಮೊದಲ ಓಟಗಾರ, ಅಮೆರಿಕದ ಜಿಮ್ ಹೈನ್ಸ್ ಜೂನ್ 5 ರಂದು ನಿಧನರಾದರು. 1968ರ ಜೂನ್‍ನಲ್ಲಿ ಸಾಕ್ರಮೆಂಟೊದಲ್ಲಿ ನಡೆದ ಅಮೆರಿಕ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಹೈನ್ಸ್ 100 ಮೀ. ಓಟವನ್ನು 9.9 ಸೆಕೆಂಡುಗಳಲ್ಲಿ ಓಡಿದ್ದರು. ಆ ವರ್ಷದ ಕೊನೆಯಲ್ಲಿ ಮೆಕ್ಸಿಕೊ ಸಿಟಿಯಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಇವರು 100 ಮೀ.ಓಟವನ್ನು 9.95 ಸೆಕೆಂಡುಗಳಲ್ಲಿ ಓಡಿದ್ದು ಎಲೆಕ್ಟ್ರಾನಿಕ್ ಟೈಮರ್‍ನಲ್ಲಿ ದಾಖಲಾಗಿ 15 ವರ್ಷ ವಿಶ್ವದಾಖಲೆ ಎನಿಸಿತ್ತು.